ಅದ್ದಿ ತಣಿಸುವಿಕೆ

ಅಧಿಕ ಉಷ್ಣದ ಮಟ್ಟದಲ್ಲಿರುವ ಲೋಹಗಳನ್ನು ತ್ವರಿತವಾಗಿ ತಣಿಸಲು ದ್ರವಮಾಧ್ಯಮದಲ್ಲಿ ಅದ್ದುವ ವಿಧಾನ (ಕ್ವೆಂಚಿಂಗ್). ಕಾದ ಉಕ್ಕನ್ನು ತಣಿಸುವಾಗ ಎಣ್ಣೆಯ ಮಾಧ್ಯಮವನ್ನು ಬಳಸಿದರೆ ತಣಿಯುವ ದರ ನೀರಿನ ಮಾಧ್ಯಮವನ್ನು ಬಳಸಿದಾಗ ದೊರೆಯುವ ದರಕ್ಕಿಂತ ಕಡಿಮೆಯಾಗಿಯೂ ಉಪ್ಪುನೀರನ್ನು ಬಳಸಿದರೆ ಆ ದರ ಹೆಚ್ಚಾಗಿಯೂ ಇರುವುದು. ಈ ದ್ರವಮಾಧ್ಯಮಗಳನ್ನು ಸಾಧಾರಣವಾಗಿ ಕೋಣೆಯ ತಾಪದ ಮಟ್ಟದಲ್ಲಿಯೇ ಇಡುವುದು ವಾಡಿಕೆ. ವಿಶೇಷ ಸಂದರ್ಭಗಳಲ್ಲಿ (ಉದಾ: ದ್ರವೀಕರಿಸಿದ ಸೀಸವನ್ನು ತಣಿಸುವಾಗ) ಮಾಧ್ಯಮದ ತಾಪವನ್ನು ಏರಿಸಲೂಬಹುದು. ಬಳಕೆಯ ಉಕ್ಕನ್ನು ಅದ್ದಿ ತಣಿಸಿದರೆ ಅದು ಇನ್ನಷ್ಟು ಕಠಿಣವಾಗುವುದು. ಈ ವಿಧಾನವನ್ನು ದೃತಶೀತಲನ ಎಂದೂ ಕರೆಯುತ್ತಾರೆ.    
(ಜೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ